ಭರ್ಜರಿ ಗೆಲ್ಲುವಿನೊಂದಿಗೆ ಟೂರ್ನಮೆಂಟ್‍ ಆರಂಭಿಸಿದ RCB

 

IPL 2026 RCB Vs SRH: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 2026 ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಯು ಎಸ್‌ಆರ್‌ಎಚ್‌ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್ ಅಭಿಯಾನಕ್ಕೆ ಅದ್ಭುತ ಚಾಲನೆ ನೀಡಿದೆ.

ಟಾಸ್ ಗೆದ್ದ ಆರ್‌ಸಿಬಿ

ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು.

ಎಸ್‌ಆರ್‌ಎಚ್ ಕಾಡಿದ ಜೇಕಬ್ ಡಫಿ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈರ್ಸ್ ಹೈದರಾಬಾದ್ ತಂಡವನ್ನು ಹ್ಯಾಜಲ್ವಡ್ ಬದಲು ಆರ್‌ಸಿಬಿ ತಂಡದಲ್ಲಿ ಅವಕಾಶ ಪಡೆದ ಜೇಕಬ್ ಡಫಿ ಎಸ್‌ಆರ್‌ಎಚ್ ಬ್ಯಾಟರ್‌ಗಳನ್ನು ಕಾಡಿದರು. ಪರಿಣಾಮ ಎಸ್‌ಆರ್‌ಎಚ್ ತಂಡವು ಪವರ್‌ಪ್ಲೇನಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.

ಆರಂಭಿಕ ಆಘಾತದಿಂದ ಪಾರು ಮಾಡಿದ ಕಿಶನ್-ಕ್ಲಾಸನ್

29 ರನ್ ಆಗುವಷ್ಟರಲ್ಲಿ ಆರಂಭಿಕರಾದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಎಸ್‌ಆರ್‌ಎಚ್ ತಂಡಕ್ಕೆ ನಾಯಕ ಇಶಾನ್ ಕಿಶನ್ ಹಾಗೂ ಹೆನ್ರಿಚ್ ಕ್ಲಾಸನ್ ಆಸರೆಯಾದರು. ಈ ಜೋಡಿ 5ನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟ ಆಡಿದರು.

ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್

ಆರಂಭದಲ್ಲಿ ಒಂದರ ಹಿಂದೆ ಒಂದು ವಿಕೆಟ್ ಹೋದಾಗ ಕ್ರೀಸ್ ಕಚ್ಚಿ ಆಡಿದ ಇಶಾನ್ ಕಿಶನ್ ಸ್ಫೋಟಕ ಇನಿಂಗ್ಸ್ ಆಡಿದರು. ಅವರು ಕೇವಲ 38 ಬಾಲ್‌ಗಳಲ್ಲಿ 5 ಸಿಕ್ಸರ್ ಹಾಗೂ 8 ಬೌಂಡರಿ ನೆರವಿನಿಂದ 80 ರನ್ ಗಳಿಸಿದರು.

ಆರ್‌ಸಿಬಿಗೆ 202 ರನ್‌ಗಳ ಗುರಿ ನೀಡಿದ ಎಸ್‌ಆರ್‌ಎಚ್

ಇಶಾನ್ ಕಿಶನ್ ಬಳಿಕ ಕೆಳಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಅನಿಕೇತ್ ವರ್ಮಾ ಅವರು ಕೇವಲ 18 ಎಸೆತಗಳಲ್ಲಿ 43 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಸಾಲ್ಟ್ ವೈಫಲ್ಯ, ಪಡಿಕ್ಕಲ್-ಕೋಹ್ಲಿ ಉತ್ತಮ ಜೊತೆಯಾಟ

9 ರನ್‌ ಇದ್ದಾಗ ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ ಅವರ ವಿಕೆಟ್ ಕಳೆದುಕೊಂಡಾಗ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಇಂಪ್ಯಾಕ್ಟ್ ಆಟಗಾರನಾಗಿ ಬಂದ ದೇವದತ್ತ ಪಡಿಕ್ಕಲ್ ಎಸ್‌ಆರ್‌ಎಚ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಈ ಜೋಡಿ 2ನೇ ವಿಕೆಟ್‌ಗೆ 101 ರನ್‌ಗಳ ಜೊತೆಯಾಟ ಆಡಿದರು.

ದೇವದತ್ತ ಸ್ಫೋಟಕ ಅರ್ಧಶತಕ

ವಿರಾಟ್ ಕೊಹ್ಲಿ ಅವರ ಜೊತೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ದೇವದತ್ತ ಪಡಿಕ್ಕಲ್ ಅವರು ಕೇವಲ 26 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 61 ರನ್ ಸಿಡಿಸಿದರು.

ಅಜೇಯವಾಗಿ ಪಂದ್ಯ ಮುಗಿಸಿದ ಕೊಹ್ಲಿ

ಕೊನೆವರೆಗೂ ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ ಅಜೇಯ 69 ರನ್ ಸಿಡಿಸಿ ಪಂದ್ಯ ಗೆಲ್ಲಿಸಿದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ