ಗಂಡು ಮಕ್ಕಳ ಮಾದರಿ ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ಎಸ್.ಪಿ. ಅವಟಿಗೇರ ನಿವೃತ್ತಿ

ಉಕ್ಕಲಿ (ಬಸವನ ಬಾಗೇವಾಡಿ): ಸ್ಥಳೀಯ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 37 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಮುಖ್ಯ ಗುರುಮಾತೆ ಶ್ರೀಮತಿ ಎಸ್.ಪಿ. ಅವಟಿಗೇರ ಅವರು ದಿನಾಂಕ 28-03-2026 ರಂದು ವಯೋನಿವೃತ್ತಿ ಹೊಂದಿದರು. ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ಹಾಗೂ ಎಸ್‌ಡಿಎಂಸಿ ವತಿಯಿಂದ ಅವರಿಗೆ ಭಾವಪೂರ್ಣ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಭಾವಿ ಮುಖ್ಯ ಗುರುಗಳಾದ ಎ.ಡಿ. ಗೆಣ್ಣೂರ ಅವರು ಮಾತನಾಡಿ, ನಿವೃತ್ತ ಮುಖ್ಯ ಗುರುಗಳ ಜೀವನ ಹಾಗೂ ಅವರು ಶಾಲೆಗೆ ನೀಡಿದ ಕೊಡುಗೆ ಅಪಾರ. ಅವರ ದಕ್ಷ ಆಡಳಿತ ಮತ್ತು ಶಾಲೆಗೆ ಒದಗಿಸಿದ ಸೌಲಭ್ಯಗಳು ಮುಂದಿನ ಪೀಳಿಗೆಗೆ ಮಾದರಿ ಎಂದು ಹಾರೈಸಿದರು. ಮತ್ತೋರ್ವ ಅತಿಥಿ ಕುಲಕರ್ಣಿ ಸರ್ ಮಾತನಾಡಿ, ಅವಟಿಗೇರ ಅವರ ಪ್ರಾಮಾಣಿಕತೆ ಮತ್ತು ಕಾರ್ಯವೈಖರಿಯನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ದಳವಾಯಿ ಸರ್ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಎಸ್.ಪಿ. ಅವಟಿಗೇರ ಅವರು, “ನನ್ನ 37 ವರ್ಷಗಳ ಸುದೀರ್ಘ ಸರಕಾರಿ ಸೇವೆಯಲ್ಲಿ 18 ವರ್ಷ ಶಿಕ್ಷಕಿಯಾಗಿ ಹಾಗೂ 19 ವರ್ಷ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಸುದೀರ್ಘ ಪಯಣ ನನಗೆ ಅತ್ಯಂತ ತೃಪ್ತಿ ತಂದಿದೆ” ಎಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಎಂ.ಸಿ. ಬಿರಾದಾರ್ ಸ್ವಾಗತಿಸಿದರು. ಶ್ರೀ ಎಂ. ಗೌಂಡಿ ಅವರು ಕಾರ್ಯಕ್ರಮ ನಿರೂಪಿಸಿ, ಗುರುಮಾತೆಯರ ಜೀವನ ಹಾದಿ ಹಾಗೂ ಅವರ ದಕ್ಷ ಆಡಳಿತದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆಜಿಎಂಪಿಯಸ್ ಉಕ್ಕಲಿ ಶಾಲೆಯ ಸಮಸ್ತ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದು ಶ್ರೀ ಬಸವರಾಜ ನಂ. ಬಾಗೇವಾಡಿ, ಸಾ: ಉಟ್ನಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ