ಲಿಂಗಸಗೂರು: ಗಡಿಯಾರ ಚೌಕದಲ್ಲಿ ವಾಹನಗಳ ಅಸ್ತವ್ಯಸ್ತ ನಿಲುಗಡೆ; ಪಾದಚಾರಿಗಳ ಹೈರಾಣು!

ವರದಿ :: ಸೋಮಶೇಖರ ನಾಯಕ

 

ಲಿಂಗಸಗೂರು: ಪಟ್ಟಣದ ಹೃದಯಭಾಗದಂತಿರುವ ಗಡಿಯಾರ ಚೌಕದಲ್ಲಿ ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ. ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ.
ಗಡಿಯಾರ ಚೌಕವು ಪಟ್ಟಣದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಜನರು ವ್ಯವಹಾರಕ್ಕಾಗಿ ಬರುತ್ತಾರೆ. ಆದರೆ, ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳನ್ನು ರಸ್ತೆಯ ಮೇಲೆ ಶಿಸ್ತುಬದ್ಧವಾಗಿ ನಿಲ್ಲಿಸದೆ, ಬೇಕಾಬಿಟ್ಟಿಯಾಗಿ ನಿಲ್ಲಿಸಲಾಗುತ್ತಿದೆ. ಇದರಿಂದ ರಸ್ತೆ ಕಿರಿದಾಗುತ್ತಿದ್ದು, ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪೊಲೀಸ್ ಠಾಣೆ ಸಮೀಪವಿದ್ದರೂ ಕ್ರಮವಿಲ್ಲ:
ಸಾರ್ವಜನಿಕರ ಆಕ್ರೋಶಕ್ಕೆ ಮುಖ್ಯ ಕಾರಣವೆಂದರೆ, ಈ ಗಡಿಯಾರ ಚೌಕದಿಂದ ಕೂಗಳತೆ ದೂರದಲ್ಲೇ ಲಿಂಗಸಗೂರು ಪೊಲೀಸ್ ಠಾಣೆ ಇದೆ. ಆದರೂ ಸಹ, ಪೊಲೀಸರು ಈ ಸಂಚಾರ ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ನೇರ ಆರೋಪವಾಗಿದೆ. ದಿನವಿಡೀ ಈ ಭಾಗದಲ್ಲಿ ಕಿರಿಕಿರಿ ಉಂಟಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕರ ಆಗ್ರಹ:
“ವಾಹನ ಸವಾರರು ಎಲ್ಲೆಂದರಲ್ಲಿ ಗಾಡಿಗಳನ್ನು ನಿಲ್ಲಿಸಿ ಹೋಗುವುದರಿಂದ ನಮಗೆ ಓಡಾಡಲು ಜಾಗವೇ ಇರುವುದಿಲ್ಲ. ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು” ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು, ಗಡಿಯಾರ ಚೌಕದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ