ಯಾದಗಿರಿ ದುರಂತ: ಬಸ್-ಕಾರು ಮುಖಾಮುಖಿ ಡಿಕ್ಕಿ – 9 ಜನರ ದಾರುಣ ಅಂತ್ಯ, ಗುರುತು ಪತ್ತೆ..

ಯಾದಗಿರಿ: ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಸಮೀಪ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಕುಟುಂಬ ಸಮೇತ ಸುರಪುರದ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದವರು ವಾಪಸ್ ಸಿರವಾರದತ್ತ ತೆರಳುವಾಗ ಈ ದುರಂತ ಸಂಭವಿಸಿದೆ. ಶಾಂತಪುರ ಕ್ರಾಸ್ ಬಳಿ ಕಾರು ಚಾಲನೆ ಮಾಡುತ್ತಿದ್ದ ಕೃಷ್ಣ ನಾಯಕ್ ಅವರು ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಈ ದುರ್ಘಟನೆಯಲ್ಲಿ ಮೃತಪಟ್ಟವರ ಗುರುತು ಇದೀಗ ಪತ್ತೆಯಾಗಿದೆ,ಡಿಕ್ಕಿಯ ತೀವ್ರತೆಗೆ ಬಸ್ ಕಾರನ್ನು ಉಜ್ಜಿಕೊಂಡು ಹೋಗಿದ್ದು, ನಂತರ ಉಂಟಾದ ಬೆಂಕಿ ಎರಡೂ ವಾಹನಗಳನ್ನು ಆವರಿಸಿದೆ. ಕೆಲವರು ಸ್ಥಳದಲ್ಲೇ ಬೆಂಕಿಗೆ ಆಹುತಿಯಾಗಿದ್ದರೆ, ಇನ್ನು ಕೆಲವರು ಗಂಭೀರ ಗಾಯಗಳು ಹಾಗೂ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ. ಕಾರು ಮತ್ತು ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಮೃತರಲ್ಲಿ ರಾಯಚೂರು ಜಿಲ್ಲೆಯ ಸಿರವಾರ ನಿವಾಸಿಗಳಾದ ಕೃಷ್ಣ ನಾಯಕ್ (52), ಅನಂತಾ ಕಲಾ ಕೃಷ್ಣ (45), ಶರಣಪ್ಪ (36), ನಿಸರ್ಗಾ (30), ಸಿದ್ಧಾರ್ಥ (5), ಶಶಿಕಲಾ (30), ಅದ್ವಿಕ್ (5), ಚಂದನಾ (8) ಹಾಗೂ ಒಂದೂವರೆ ವರ್ಷದ ಶ್ರೀನಿಧಿ ಸೇರಿದ್ದಾರೆ. ಈ ದುರ್ಘಟನೆಯಲ್ಲಿ ಶಶಿಕಲಾ ಅವರ ಪುತ್ರ ವಿರಾಟ್ ಮಾತ್ರ ಬದುಕುಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸ್ಥಳೀಯರೂ ಸಹ ನೆರವಾಗಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್‌ನಲ್ಲಿದ್ದ ಸುಮಾರು 20 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ್, ಎಸ್‌ಪಿ ಪೃಥ್ವಿಕ್ ಶಂಕರ್, ಡಿವೈಎಸ್‌ಪಿ ಇನಾಮದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ