ಬೆಂಗಳೂರು : ಜೂನ್ 25ಕ್ಕೆ ತೆರವಾಗಲಿರುವ ಕರ್ನಾಟಕದ ನಾಲ್ಕು ರಾಜ್ಯಸಭಾ (Rajya Sabha) ಸ್ಥಾನಗಳ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಎನ್‌ಡಿಎ (NDA) ಮೈತ್ರಿಕೂಟದಲ್ಲಿ ರಾಜಕೀಯ ಲಾಬಿ ಭರದಿಂದ ಸಾಗುತ್ತಿದೆ.
ವಿಧಾನಸಭೆಯ ಪ್ರಸ್ತುತ ಸಂಖ್ಯಾಬಲದ ಆಧಾರದ ಮೇಲೆ ನಾಲ್ಕು ಸ್ಥಾನಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಹಾಗೂ ಒಂದು ಸ್ಥಾನದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸುಲಭವಾಗಿ ಜಯಗಳಿಸಬಹುದಾಗಿದೆ. ಆದರೆ, ಮೈತ್ರಿಕೂಟಕ್ಕೆ ಸಿಗಲಿರುವ ಈ ಏಕೈಕ ಸ್ಥಾನಕ್ಕಾಗಿ ಇಬ್ಬರು ಘಟಾನುಘಟಿ ಹಿರಿಯ ನಾಯಕರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿರುವುದು ವರಿಷ್ಠರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ದೇವೇಗೌಡರ ಮರುಆಯ್ಕೆ ಹಾದಿಗೆ ಸದಾನಂದ ಗೌಡರ ಅಡ್ಡಿ
ಪ್ರಸ್ತುತ ರಾಜ್ಯಸಭೆಯಲ್ಲಿ ಸದಸ್ಯರಾಗಿರುವ ಬಿಜೆಪಿಯ ಕೆ. ನಾರಾಯಣ, ಈರಣ್ಣ ಕಡಾಡಿ, ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‌ನ ಎಚ್.ಡಿ. ದೇವೇಗೌಡ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದೆ. ಜೆಡಿಎಸ್‌ನಿಂದ ದೇವೇಗೌಡರು ಮತ್ತೊಮ್ಮೆ ಮರು ಆಯ್ಕೆ ಬಯಸಿದ್ದಾರೆ. ಆದರೆ, ಲೋಕಸಭಾ ಚುನಾವಣೆಯ ವೇಳೆ ಸಕ್ರಿಯ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರು ತಾವೂ ರಾಜ್ಯಸಭೆಯ ಪ್ರಬಲ ಆಕಾಂಕ್ಷಿ ಎಂದು ಬಹಿರಂಗವಾಗಿ ಘೋಷಿಸಿರುವುದು ಮೈತ್ರಿಕೂಟವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸದಾನಂದ ಗೌಡರ ಪರ ಬಿಎಸ್‌ವೈ ಬ್ಯಾಟಿಂಗ್
ಈ ಇಬ್ಬರು ಹಿರಿಯ ನಾಯಕರ ನಡುವಿನ ಪೈಪೋಟಿ ಈಗ ದೆಹಲಿ ಮಟ್ಟದಲ್ಲಿ ಹೈಕಮಾಂಡ್ ನಾಯಕರ ಅಂಗಳ ತಲುಪಿದ್ದು, ಉಭಯ ನಾಯಕರ ಪರವಾಗಿ ಭಾರಿ ರಾಜಕೀಯ ತಂತ್ರಗಾರಿಕೆಗಳು ನಡೆಯುತ್ತಿವೆ. ಕಳೆದ ಲೋಕಸಭಾ ಚುನಾವಣೆಯ ಕಡೇ ಕ್ಷಣದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತರಾಗಿದ್ದ ಡಿ.ವಿ. ಸದಾನಂದ ಗೌಡ ಅವರಿಗೆ ರಾಜ್ಯಸಭಾ ಸ್ಥಾನ ಕೊಡಿಸಲು ರಾಜ್ಯ ಬಿಜೆಪಿ ಘಟಕ ಉತ್ಸುಕವಾಗಿದೆ. ವಿಶೇಷವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸದಾನಂದ ಗೌಡರನ್ನು ಮೇಲ್ಮನೆಗೆ ಕಳುಹಿಸಲು ಬಲವಾದ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಾಜ್ಯಸಭೆಗೆ ಆಯ್ಕೆಯಾಗಲು ಕನಿಷ್ಠ 43 ರಿಂದ 44 ಶಾಸಕರ ಬಲ ಬೇಕಾಗಿದ್ದು, ಪ್ರಸ್ತುತ ಕೇವಲ 17 ಶಾಸಕರನ್ನು ಹೊಂದಿರುವ ಜೆಡಿಎಸ್, ಸಂಪೂರ್ಣವಾಗಿ ಬಿಜೆಪಿಯ 63 ಶಾಸಕರ ಬೆಂಬಲದ ಮೇಲೆಯೇ ಅವಲಂಬಿತವಾಗಿದೆ. ತಂದೆಯವರ ಮರು ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಒಂದು ಸುತ್ತಿನ ಮಹತ್ವದ ಮಾತುಕತೆ ನಡೆಸಿದ್ದಾರೆ.
ಸದಾನಂದ ಗೌಡರ ಮುಕ್ತ ಹೇಳಿಕೆ
ನಾವು ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿದ್ದೇವೆ. ನಮಗೆ ಹೆಚ್ಚಿನ ಸಂಖ್ಯಾಬಲವಿದ್ದರೂ ಸಹ, ನನ್ನನ್ನು ರಾಜ್ಯಸಭೆಗೆ ಕಳುಹಿಸುವ ವಿಚಾರವನ್ನು ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ. ನಾನು ಚುನಾವಣಾ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಮೊದಲೇ ಹೇಳಿದ್ದೇನೆ, ಆದರೆ ರಾಜ್ಯಸಭೆಗೆ ಹೋಗಲು ಬಯಸಿದ್ದೇನೆ” ಎಂದು ಮೈಸೂರಿನಲ್ಲಿ ಡಿ.ವಿ.ಎಸ್ ಸ್ಪಷ್ಟಪಡಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರೊಂದಿಗೆ ಅತ್ಯಂತ ಆಪ್ತ ಸಂಬಂಧ ಹೊಂದಿದ್ದಾರೆ. ಹಿರಿಯ ನಾಯಕರ ಅನುಭವ ದೇಶಕ್ಕೆ ಮುಖ್ಯ ಎಂದು ಈ ಹಿಂದೆ ಮೋದಿಯವರೇ ಹೇಳಿದ್ದರು. ಜೊತೆಗೆ ಜೆಡಿಎಸ್‌ನ ಮೈತ್ರಿಯೂ ಮುಖ್ಯವಾಗಿರುವುದರಿಂದ ದೇವೇಗೌಡರನ್ನು ನಿರ್ಲಕ್ಷಿಸುವುದು ಅಮಿತ್ ಶಾಗೆ ಸುಲಭವಲ್ಲ. ಇನ್ನೊಂದೆಡೆ, ಕಳೆದ ಬಾರಿ ಅಸಮಾಧಾನಗೊಂಡಿದ್ದ ಸದಾನಂದ ಗೌಡರನ್ನು ಸಮಾಧಾನಪಡಿಸುವ ಅನಿವಾರ್ಯತೆಯೂ ಬಿಜೆಪಿಗೆ ಇದೆ. ಹೀಗಾಗಿ, ಪ್ರಾದೇಶಿಕ ಮೈತ್ರಿ ಧರ್ಮ ಮತ್ತು ಪಕ್ಷದ ಒಳಗಿನ ಆಂತರಿಕ ಹಿತಾಸಕ್ತಿ ಎರಡನ್ನೂ ಬ್ಯಾಲನ್ಸ್ ಮಾಡಿಕೊಂಡು ಅಂತಿಮ ನಿರ್ಧಾರ ಪ್ರಕಟಿಸುವ ಭಾರಿ ಜವಾಬ್ದಾರಿ ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಗಲಿಗೆ ಬಿದ್ದಿದ್ದು, ಕಮಲ-ಕದರ ಪಾಳಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.