ಬಡತನದ ತೊಟ್ಟಿಲಿನಿಂದ ಬೆಳೆದು ನಾಡಿನ ಕೀರ್ತಿ ಪತಾಕೆ ಹಾರಿಸಿದ ಖ್ಯಾತ ಇತಿಹಾಸಕಾರ ಡಾ. ಸಾಯಿಬಣ್ಣ ಕಲ್ಲಪ್ಪ ಮೇಲಕಾರ ಅವರಿಗೆ ‘ಶಿಕ್ಷಣ ಶ್ರೀ’ ಪ್ರಶಸ್ತಿ ಗರಿ

Veer Rc
By Veer Rc

ಧಾರವಾಡ : ಕಲ್ಯಾಣ ಕರ್ನಾಟಕದ ಹಿಂದುಳಿದ ಭಾಗದಿಂದ ಬಡತನದ ಬೇಗೆಯಲ್ಲಿ ಬೆಂದು, ಅಹರ್ನಿಶಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ, ಇಂದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕನ್ನಡ ನಾಡು-ನುಡಿಗೆ ಕೀರ್ತಿ ತಂದಿರುವ ಹಿರಿಯ ಇತಿಹಾಸಕಾರ, ಪ್ರಾಚ್ಯಶಾಸ್ತ್ರಜ್ಞ ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಸಾಯಿಬಣ್ಣ ಕಲ್ಲಪ್ಪ ಮೇಲಕಾರ ಅವರಿಗೆ ಧಾರವಾಡ ಜಿಲ್ಲೆಯ ರೋಟರಿ ಕ್ಲಬ್ ವತಿಯಿಂದ ಪ್ರತಿಷ್ಠಿತ ‘ಶಿಕ್ಷಣ ಶ್ರೀ’ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 

ಶಿಕ್ಷಣ, ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅಳಿಲು ಸೇವೆ:

 

ಮೂಲತಃ ಕಲ್ಯಾಣ ಕರ್ನಾಟಕದವರಾದ ಡಾ. ಸಾಯಿಬಣ್ಣ ಮೇಲಕಾರ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಎಂ.ಎ. ಹಾಗೂ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಕಳೆದ 25 ವರ್ಷಗಳ ಬೋಧನೆ ಮತ್ತು 30 ವರ್ಷಗಳ ಸುದೀರ್ಘ ಸಂಶೋಧನಾ ಜೀವನದಲ್ಲಿ ಅವರು ಇತಿಹಾಸ, ಕಲೆ, ವಾಸ್ತುಶಿಲ್ಪ, ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಹತ್ತಾರು ವಿದ್ಯಾರ್ಥಿಗಳು ಡಾಕ್ಟರೇಟ್ (ಪಿಎಚ್.ಡಿ.) ಪದವಿ ಪಡೆದಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 50ಕ್ಕೂ ಹೆಚ್ಚು ಪ್ರಶಸ್ತಿಗಳು ಇವರ ಕಿರೀಟಕ್ಕೆೆ ಇವೇ. ಅಲ್ಲದೆ, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಬಿಒಎಸ್ (BOS) ಹಾಗೂ ಬಿಒಇ (BOE) ಸದಸ್ಯರಾಗಿ, ಮೌಲ್ಯಮಾಪಕರಾಗಿ ಮತ್ತು ವಿವಿಧ ಅಕಾಡೆಮಿಗಳ ಪದಾಧಿಕಾರಿಗಳಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದಾರೆ.

 

 

 

ಬುಡಕಟ್ಟು ಸಮುದಾಯಗಳ ಇತಿಹಾಸ ಹಾಗೂ ಸಮುದಾಯಗಳ ಕುರಿತು ದೇಶದಲ್ಲೇ ಪ್ರಥಮ ಬಾರಿಗೆ ಹತ್ತಾರು ಆಳವಾದ ಪುಸ್ತಕಗಳನ್ನು ಬರೆಯುವ ಮೂಲಕ ಈ ಸಮುದಾಯಗಳ ಶ್ರೇಷ್ಠ ಸಾಹಿತ್ಯ ಹಾಗೂ ಇತಿಹಾಸಕಾರರಾಗಿ ಡಾ. ಮೇಲಕಾರ ಹೊರಹೊಮ್ಮಿದ್ದಾರೆ. ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಅಂಬಿಗರ ಚೌಡಯ್ಯ ಜಯಚರಣೆ ಆಚರಣೆಯಲ್ಲಿ ಇವರ ಪಾತ್ರ ನಿರ್ಣಾಯಕವಾಗಿದೆ.

 

ಸಮಾಜಮುಖಿ ಚಿಂತನೆ ಮತ್ತು ಸಂಘಟನಾತ್ಮಕ ಸೇವೆ:

 

ಕೇವಲ ಅಧ್ಯಾಪನಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ನೂರಾರು ಸಭೆ-ಸಮಾರಂಭಗಳ ಮೂಲಕ ಶಿಕ್ಷಣ, ಸಮಾಜ ಮತ್ತು ಸಂಬಂಧಿಸಿದಂತೆ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿರುವ ಇವರು ನಾಡಿನ ಹೆಸರಾಂತ ಇತಿಹಾಸಕಾರರಾಗಿದ್ದಾರೆ. ಬಡತನದ ಕಠಿಣ ಹಿನ್ನೆಲೆಯಿಂದ ಬಂದು, ವಿದ್ಯಕಾಶಿ ಧಾರವಾಡದಲ್ಲಿ ಉನ್ನತ ಸಾಧನೆಗೈದು ಸಮಾಜ ಹಾಗೂ ಧರ್ಮ ಸೇವೆ ಮಾಡುತ್ತಿರುವ ಇವರ ಸಾಧನೆ ಇಡೀ ಕಲ್ಯಾಣ ಕರ್ನಾಟಕ ಹಾಗೂ ಸಮಗ್ರ ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿದೆ.

 

ಡಾ. ಸಾಯಿಬಣ್ಣ ಕಲ್ಲಪ್ಪ ಮೇಲಕಾರ ಅವರ ಈ ಸಾಧನೆಗೆ ಸಮಾಜದ ಪರವಾಗಿ ಹಾಗೂ ನಾಡಿನ ಗಣ್ಯರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This Article