ಕಾಂಗ್ರೆಸ್ ಪಕ್ಷದ ಹುದ್ದೆ, ನಿಗಮ–ಮಂಡಳಿಗಳಲ್ಲಿ ಅವಕಾಶಕ್ಕೆ ಆಗ್ರಹ: ಹುಸೇನ್ ಭಾಷ

Veer Rc
By Veer Rc

 

ಲಿಂಗಸೂಗೂರು ತಾಲೂಕಿನ ಮುಸ್ಲಿಂ ಸಮುದಾಯವು ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಸಾರ್ವಜನಿಕ ಬದುಕಿನಲ್ಲಿ ನಿಷ್ಠೆಯಿಂದ ದುಡಿಯುತ್ತಾ ಬಂದಿದ್ದರೂ, ಜನಸಂಖ್ಯೆ, ಅರ್ಹತೆ ಹಾಗೂ ಕೊಡುಗೆಗೆ ಅನುಗುಣವಾಗಿ ಪಕ್ಷದ ಹುದ್ದೆಗಳು, ನಿಗಮ–ಮಂಡಳಿಗಳು, ಪ್ರಾಧಿಕಾರಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂಬ ಅಸಮಾಧಾನ ಸಮುದಾಯದಲ್ಲಿದೆ ಎಂದು ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರು ತಾಲೂಕು ಕಮಿಟಿ ಅಧ್ಯಕ್ಷ ರಾದ ಹುಸೇನ ಭಾಷ
ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಚತುರ್ಥಿಯ ಅಂಗವಾಗಿ ನಾಡಿನ ಸಮಸ್ತ ಹಿಂದೂ ಬಾಂಧವರಿಗೆ ಅಂಜುಮನ್-ಎ-ಮುಸ್ಲಿಮೀನ್ ವತಿಯಿಂದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದರು.

ನಾಡಿನ ಸಮಸ್ತ ಜನತೆಗೆ ಆರೋಗ್ಯ, ಆಯುಷ್ಯ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ದೊರೆಯಲಿ. ಎಲ್ಲರ ಬದುಕಿನಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಸಂತೋಷ ಸದಾ ನೆಲೆಸಲಿ ಎಂದು ಅಲ್ಲಾಹನಲ್ಲಿ ಹೃದಯಪೂರ್ವಕವಾಗಿ ಪ್ರಾರ್ಥಿಸುವುದಾಗಿ ತಿಳಿಸಿದರು.

“ಹಬ್ಬಗಳು ಬೇರೆ ಇರಬಹುದು, ಆದರೆ ನಮ್ಮ ಹೃದಯಗಳು ಒಂದಾಗಿರಲಿ. ಸೌಹಾರ್ದತೆ ಸದಾ ಉಳಿಯಲಿ” ಎಂದು ಅವರು ಹೇಳಿದರು.
ಲಿಂಗಸೂಗೂರು ತಾಲೂಕಿನಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳನ್ನು ಒಳಗೊಂಡಂತೆ ಸುಮಾರು 65 ಸಾವಿರ ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯವನ್ನು ನಿರಂತರವಾಗಿ ಕಡೆಗಣಿಸುವುದು ಎಷ್ಟು ನ್ಯಾಯ? ಚುನಾವಣಾ ಸಂದರ್ಭದಲ್ಲಿ ಬೆಂಬಲಕ್ಕಾಗಿ ಸಮುದಾಯವನ್ನು ನೆನಪಿಸಿಕೊಳ್ಳುವುದು, ಆದರೆ ಅಧಿಕಾರ ಹಾಗೂ ಜವಾಬ್ದಾರಿಯ ಅವಕಾಶ ಬಂದಾಗ ಮರೆತುಬಿಡುವುದು ಏಕೆ ಎಂದು ಅವರು ಪ್ರಶ್ನಿಸಿದರು.

ಹಲವು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಸಮರ್ಥ ಹಾಗೂ ಅನುಭವಿ ವ್ಯಕ್ತಿಗಳು ಸಮುದಾಯದಲ್ಲಿದ್ದಾರೆ. ಯಾವುದೇ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಅರ್ಹತೆ ಹೊಂದಿರುವ ಅನೇಕರು ಇದ್ದಾರೆ. ಆದ್ದರಿಂದ ಲಿಂಗಸೂಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸೇರಿದಂತೆ ಮುಂಬರುವ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ, ಅನುಭವ ಮತ್ತು ನಿಷ್ಠೆಗೆ ಮಾನ್ಯತೆ ನೀಡಿ ತಾಲೂಕಿನ ಮುಸ್ಲಿಂ ಸಮುದಾಯದವರಿಗೆ ಸೂಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಬರೀ ಭರವಸೆ ನೀಡಿ ಕತ್ತಲಲ್ಲಿಡುವ ರಾಜಕೀಯ ನಡೆಯನ್ನು ಇನ್ನು ಮುಂದೆ ಸಹಿಸುವುದಿಲ್ಲ. ಈ ಬಾರಿಯೂ ಸಮುದಾಯದವರಿಗೆ ಸೂಕ್ತ ಉನ್ನತ ಹುದ್ದೆಗಳನ್ನು ನೀಡದೆ ಕಡೆಗಣಿಸಿದರೆ, ಮುಂಬರುವ ಎಲ್ಲ ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯವು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಸಲೀಮ್ ಪಾಶ ಎಚ್ಚರಿಕೆ ನೀಡಿದರು.

“ನಮ್ಮ ನಿಷ್ಠೆಯನ್ನು ದೌರ್ಬಲ್ಯವೆಂದು ತಿಳಿಯಬೇಡಿ. ನಮ್ಮ ಹಕ್ಕು ನಮಗೆ ಸಿಗಲೇಬೇಕು” ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅನ್ಸಾರುದ್ದಿನ್ ಜೆ. ಬಾಬು ಹಟ್ಟಿ, ವಾಸಿಮ್ ಪಾಶ, ದಾದಾಪಿರ್ ಮರಗಂಟನಾಳ, ಶಹಜಹಾನ್, ಮಹ್ಮದ ರಫೀ, ಶೇಖ್ ಅಲಿ, ಕಲೀಮ್ ಪಾಶ, ರೆಹಮಾನ್ ಸಾಬ್, ಆದಿಲ್ ಪಾಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share This Article