ದೇವರ ಹಿಪ್ಪರಗಿ : ದೇವರ ಹಿಪ್ಪರಗಿ ಮತಕ್ಷೇತ್ರದ ಭೈರವಾಡಗಿ ಗ್ರಾಮದಲ್ಲಿ ಭಾವೈಕ್ಯತೆಯ ಸಂಕೇತವಾದ ಶ್ರೀ ಖ್ವಾಜಾ ಅಮೀನದಿನ (ಸಂತ ಭೈರಾಜೋಗಿ) ದರ್ಗಾದ ಉರುಸ್-ಎ-ಷರೀಪ್ ಕಾರ್ಯಕ್ರಮವು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಜರುಗಿತು.
ಕಳೆದ 52 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಈ ಸಂಪ್ರದಾಯದಂತೆ, ಈ ವರ್ಷವೂ ಸಹ ಅದ್ದೂರಿ ಉರುಸ್ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಬಸನಗೌಡ ಎಸ್. ಪಾಟೀಲ (ಯಡಿಯಾಪುರ) ಅವರು ಉದ್ಘಾಟಿಸಿದರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಗ್ರಾಮೀಣ ಭಾಗದ ಇಂತಹ ಜಾತ್ರೆ ಮತ್ತು ಉರುಸ್‌ಗಳು ಜನರ ನಡುವೆ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದತೆಯನ್ನು ಹೆಚ್ಚಿಸುತ್ತವೆ. ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಗ್ರಾಮಸ್ಥರು ಈ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಸಂತ ಭೈರಾಜೋಗಿಯವರ ಆಶೀರ್ವಾದ ಎಲ್ಲರ ಮೇಲಿರಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ದರ್ಗಾ ಸಮಿತಿಯ ಪದಾಧಿಕಾರಿಗಳು ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಭಾವೈಕ್ಯತೆಯ ಸಂಕೇತವಾಗಿ ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಉರುಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು