ಬಡತನವನ್ನೇ ಮೆಟ್ಟಿಲು ಮಾಡಿಕೊಂಡ ಮಲ್ಲಿಕಾರ್ಜುನ ಹಿರೇಕೊಪ್ಪ: ಕಾರಕೂನನ ಮಗನಿಂದ ಎಲ್.ಐ.ಸಿ ಅಧಿಕಾರಿಯವರೆಗೆ ಸ್ಪೂರ್ತಿದಾಯಕ ಯಶೋಗಾಥೆ

Veer Rc
By Veer Rc

ಗಜೇಂದ್ರಗಡ: “ಬಡವರಾಗಿ ಹುಟ್ಟುವುದು ನಮ್ಮ ತಪ್ಪಲ್ಲ, ಆದರೆ ಬಡವರಾಗಿಯೇ ಸಾಯಬಾರದು” ಎಂಬ ಮಾತನ್ನು ಅಕ್ಷರಶಃ ಪಾಲಿಸುವ ಮೂಲಕ, ಸಾಮಾನ್ಯ ಹಿನ್ನೆಲೆಯಿಂದ ಬಂದು ಇಂದು ಭಾರತೀಯ ಜೀವ ವಿಮಾ ನಿಗಮದ (LIC) ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಹಿರೇಕೊಪ್ಪ ಅವರ ಬದುಕು ಯುವಜನತೆಗೆ ದಾರಿದೀಪವಾಗಿದೆ.

 

​ಸಂಘರ್ಷದ ಬದುಕು:
ಗದಗ ಜಿಲ್ಲೆಯ ರೋಣ ತಾಲೂಕಿನ ಉಣಚಗೇರಿ ಗ್ರಾಮದ ಬಡ ಕುಟುಂಬದಲ್ಲಿ 1983 ಜೂನ್ 1ರಂದು ಜನಿಸಿದ ಮಲ್ಲಿಕಾರ್ಜುನ ಅವರ ಬಾಲ್ಯ ಕಷ್ಟಗಳ ಸುರುಳಿ. ತಂದೆ ಕಳಕಪ್ಪ ಸ್ಥಳೀಯ ಬಟ್ಟೆಯ ಅಂಗಡಿಯಲ್ಲಿ ಕಾರಕೂನರಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಕೂಲಿ ಕೆಲಸ ಮಾಡುತ್ತಿದ್ದರು. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ತಂದೆ-ತಾಯಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮಹತ್ವ ನೀಡಿದರು.

 

​ಶಿಕ್ಷಣಕ್ಕಾಗಿ ಸಾಗಿದೆ ಹಾದಿ:
ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಲ್ಲಿಕಾರ್ಜುನ, ಬಳೂಟಗಿ ಗ್ರಾಮದ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದು ಪ್ರೌಢ ಶಿಕ್ಷಣ ಮುಗಿಸಿದರು. ಗಜೇಂದ್ರಗಡದ ಎಸ್.ಎಂ. ಭೂಮರಡ್ಡಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ಆರ್ಥಿಕ ಅಡಚಣೆಗಳ ನಡುವೆಯೂ ಛಲ ಬಿಡದ ಅವರು, ರೇವಣಸಿದ್ದೇಶ್ವರ ಮೆಡಿಕಲ್ ಸ್ಟೋರ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಲೇ ದೂರ ಶಿಕ್ಷಣದ ಮೂಲಕ ಪದವಿ ಮತ್ತು ರೋಣದ ರಾಜೀವ್ ಗಾಂಧಿ ಕಾಲೇಜಿನಲ್ಲಿ ಬಿ.ಎಡ್ ಪದವಿಯನ್ನು ಪೂರ್ಣಗೊಳಿಸಿದರು.

 

​ಎಲ್.ಐ.ಸಿಯಲ್ಲಿ ಉನ್ನತ ಸಾಧನೆ:
ಶಿಕ್ಷಣದ ನಂತರ ಗದಗ ಎಲ್.ಐ.ಸಿ ಶಾಖೆ-2ರಲ್ಲಿ ಏಜೆಂಟ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದ ಇವರು, ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಇಂದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಎಲ್.ಐ.ಸಿ ಅಧಿಕಾರಿಯಾಗಿ ಭಡ್ತಿ ಪಡೆದಿದ್ದಾರೆ. ಕೇವಲ ತಮ್ಮ ಉದ್ಯೋಗಕ್ಕೆ ಸೀಮಿತವಾಗದೆ, ನೂರಾರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

 

​ಈ ಕುರಿತು ಮಾಹಿತಿ ನೀಡಿರುವ ಅವರ ಅಭಿಮಾನಿ ಯಮನೂರಪ್ಪ ಅಬ್ಬಿಗೇರಿ ಅವರು, “ಮಲ್ಲಿಕಾರ್ಜುನ ಅವರ ಸಾಧನೆ ಬಡ ಕುಟುಂಬದ ಯುವಕರಿಗೆ ದೊಡ್ಡ ಸ್ಪೂರ್ತಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Share This Article