ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರಕ್ಕೆ ರೈತ ಸಂಘದಿಂದ ಆಗ್ರಹ

ನಕಲಬುರಗಿ ಜ 12 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಲಬುರಗಿ ಜಿಲ್ಲಾ ಘಟಕವು ಜಿಲ್ಲೆಯ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

ಬೆಳೆ ವಿಮೆ ಹಾಗೂ ಪರಿಹಾರಕ್ಕೆ ಒತ್ತಾಯ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಬೆಳೆಗಳು ಸಂಪೂರ್ಣ ನಾಶವಾಗಿದ್ದರೂ, ಇಲ್ಲಿಯವರೆಗೆ ರೈತರಿಗೆ ಬೆಳೆ ವಿಮೆ ವಿತರಣೆಯಾಗಿಲ್ಲ. ಕೂಡಲೇ ಎಲ್ಲಾ ಬೆಳೆಗಳಿಗೆ ವಿಮೆ ಪರಿಹಾರ ಧನ ನೀಡಬೇಕು ಮತ್ತು ಅತಿವೃಷ್ಟಿ ಪರಿಹಾರ ಪಡೆಯದ ಬಾಕಿ ಇರುವ 50% ರೈತರಿಗೆ ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಸಂಘವು ಆಗ್ರಹಿಸಿದೆ.

ಸಾಲ ಸೌಲಭ್ಯ ಹಾಗೂ ಮನ್ನಾ: ಡಿ.ಸಿ.ಸಿ. ಬ್ಯಾಂಕ್ ವ್ಯಾಪ್ತಿಯ ಸೊಸೈಟಿಗಳಲ್ಲಿ ಕಳೆದ 10 ವರ್ಷಗಳಿಂದ ನೂತನ ಸದಸ್ಯರಾದ ರೈತರಿಗೆ ಸಾಲ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಬಜೆಟ್‌ನಲ್ಲಿ ಹೊಸ ಸದಸ್ಯರಿಗೂ ಸಾಲ ನೀಡುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಸಂಕಷ್ಟದಲ್ಲಿರುವ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ನಮ್ಮ ಹೊಲ ನಮ್ಮ ದಾರಿ ಯೋಜನೆಗೆ ಪ್ಯಾಕೇಜ್: ಅತಿವೃಷ್ಟಿಯಿಂದಾಗಿ ಜಮೀನುಗಳಿಗೆ ಹೋಗುವ ದಾರಿಗಳು ಸಂಪೂರ್ಣ ಹಾಳಾಗಿದ್ದು, ರೈತರು ದವಸ ಧಾನ್ಯಗಳನ್ನು ಮನೆಗೆ ತರಲು ಹರಸಾಹಸ ಪಡುತ್ತಿದ್ದಾರೆ. ಆದ್ದರಿಂದ ‘ನಮ್ಮ ಹೊಲ ನಮ್ಮ ದಾರಿ’ ಯೋಜನೆಯಡಿ ಪ್ರತಿ ತಾಲೂಕಿಗೆ ತಲಾ 50 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಬೇಕು ಮತ್ತು ಈ ಹಿಂದೆ ನೀಡಿದ ಭರವಸೆಯಂತೆ ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಎಸ್. ಜಮಾದಾರ, ಕಮಾಲ ಪಟೇಲ ಗೌರವಅಧ್ಯಕ್ಷರು ಜೇವರ್ಗಿ.ತಾಲೂಕು ಅಧ್ಯಕ್ಷರುಗಳಾದ ಈರಣ್ಣ ಬಜಂತ್ರಿ (ಯಡ್ರಾಮಿ), ಜಗದೀಶ ಕಡ್ಲಿ (ಜೇವರ್ಗಿ), ಜಿಲ್ಲಾ ಗೌರವ ಅಧ್ಯಕ್ಷ ವಿಠಲ ಮಾಕಾ ಗೌಡರು, ಜಿಲ್ಲಾ ಉಪಾಧ್ಯಕ್ಷ ಶಿವಯ್ಯ ಸ್ವಾಮಿ ಮತ್ತು ಮಹಿಳಾ ಘಟಕದ ಕಮಲಾಬಾಯಿ ಸಜ್ಜನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ