ಮಾಜಿ ವಿಧಾನ ಪರಿಷತ್ ಸದಸ್ಯರುಗಳಾದ ಅಶ್ವತ್ಥನಾರಾಯಣ, ತಿಮ್ಮಯ್ಯ ರಿಂದ ಫ್ಲಾಟ್ ಗಳ ಅಕ್ರಮ ಪರಭಾರೆ: ಆನಂದ ಬಿ

ಬೆಂಗಳೂರು: ಮಾಜಿ ವಿಧಾನ ಪರಿಷತ್ ಸದಸ್ಯರುಗಳು ಮತ್ತು ಬಿಜೆಪಿ ವಕ್ತಾರರಾಗಿದ್ದ ಅಶ್ವತ್ಥನಾರಾಯಣ ಮತ್ತು ಎಂ ತಿಮ್ಮಯ್ಯ ಒಪ್ಪಂದವನ್ನು ಉಲ್ಲಂಘಿಸಿ, ನಮ್ಮ ಸಂಸ್ಥೆಗೆ ವಂಚಿಸಿ ಸಾಯಿ ಗಂಗೋತ್ರಿ ಹಿಲ್ ಕ್ರಸ್ಟ್ ನ ನಾಲ್ಕು ವಸತಿ ಫ್ಲಾಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿದ್ದಾರೆ ಎಂದು ಮಾಬಾ ಕಾರ್ಪೊರೇಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಪರ ವಕೀಲರಾದ ಆನಂದ ಬಿ ಆರೋಪಿಸಿದರು.

ಬುಧವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಶ್ವತ್ಥನಾರಾಯಣ ಮತ್ತು ಅವರ ಆಪ್ತರಾದ ಎಂ ತಿಮ್ಮಯ್ಯ ಅವರೊಂದಿಗೆ ಬೆಂಗಳೂರು ಹೊರವಲಯದ ರಾಮಸಂದ್ರ ಗ್ರಾಮದ ವಿಶ್ವೇಶ್ವರಯ್ಯ ಲೇಔಟ್ ನ ಸರ್ವೇ ನಂಬರ್ 102/1 ಮತ್ತು 103/1 ನಲ್ಲಿ ಸಾಯಿ ಗಂಗೋತ್ರಿ ಹಿಲ್ ಕ್ರಸ್ಟ್ ವಸತಿ ಸಮುಚ್ಚಯದ ಫ್ಲಾಟ್ ಗಳ ಸಂಬಂಧ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಕಾಮಗಾರಿ ಪೂರ್ಣ ಗೊಂಡ ನಂತರ ಫ್ಲಾಟ್ ನಂಬರ್ ಗಳಾದ 713,517,705 ಮತ್ತು 313 ನಮ್ಮ ಸಂಸ್ಥೆಯ ಅಧೀನಕ್ಕೆ ಬರಬೇಕಿತ್ತು. ಆದರೆ ಅಕ್ರಮವಾಗಿ ಮಾರಾಟ ದಾಖಲೆಗಳನ್ನು ರಚಿಸಿ ಸಂಸ್ಥೆಗೆ ವಂಚಿಸಿ ಫ್ಲಾಟ್ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ ಎಂದು ದೂರಿದರು.

ನಾಲ್ಕು ಫ್ಲ್ಯಾಟ್ ಗಳಿಗೆ ಸಂಬಂಧಿಸಿದಂತೆ ಪ್ರತಿ ಫ್ಲಾಟ್ ಗೆ 20 ಲಕ್ಷ ರೂಪಾಯಿ ಗಳಂತೆ 80 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ. ಉಳಿದ ಮೊತ್ತವನ್ನು ಮಾರಾಟ ದಾಖಲೆ ನೋಂದಣಿಯ ಸಮಯದಲ್ಲಿ ಪಾವತಿಸಲು ಒಪ್ಪಂದವಾಗಿತ್ತು. ಅನೇಕ ಬಾರಿ ಈ ಸಂಬಂಧ ಸ್ಮರಣಿಕೆ ನೀಡಿ ಉಳಿದ ಮೊತ್ತವನ್ನು ಪಾವತಿಸಲು ಮುಂದಾದರೂ ಮಾರಾಟ ದಾಖಲೆಗಳನ್ನು ಮಾಡಿ ಕೊಡದೆ ಸಬೂಬು ಹೇಳುತ್ತಾ ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ ಎಂದರು.

ಮಾರಾಟ ಕ್ರಯ ಪತ್ರವನ್ನು ಮಾಡಿಕೊಡಲು ತಡವಾದರೆ ಪ್ರತಿ ತಿಂಗಳು 2% ಬಡ್ಡಿದರ ಪಾವತಿಸುವ ಕರ್ತವ್ಯ ಒಪ್ಪಂದದ ಪ್ರಕಾರ ಅಶ್ವತ್ಥನಾರಾಯಣ ಮತ್ತು ಎಂ ತಿಮ್ಮಯ್ಯ ಅವರದ್ದಾಗಿತ್ತು, ಆದರೆ ಯಾವುದೇ ಮೊತ್ತವನ್ನು ಮರು ಪಾವತಿಸದೇ, ಬಡ್ಡಿಯನ್ನು ಕೂಡ ನೀಡದೇ ಮೂರನೇ ವ್ಯಕ್ತಿಗಳಿಗೆ ಮಾರಾಟ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಗಳ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯ ಮೂಲಕ ಮಬಾ ಕಾರ್ಪೋರೇಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಸಾಯಿ ಗಂಗೋತ್ರಿ ಹಿಲ್ ಕ್ರಸ್ಟ್ ಯೋಜನೆಯಲ್ಲಿ ಒಟ್ಟು 4 ಫ್ಲಾಟ್ ಗಳ ಕಾನೂನು ಬದ್ದ ಹಕ್ಕು ಸ್ಥಾಪಿಸಲು ಅನುಮತಿ ನೀಡಬೇಕು, ಮತ್ತು ಅವುಗಳನ್ನು ಸಂಸ್ಥೆಯ ವಶಕ್ಕೆ ನೀಡಬೇಕು ಇಲ್ಲವಾದರೆ ಮೂರನೇ ವ್ಯಕ್ತಿಗಳಿಗೆ ಮಾರಾಟ ದಾಖಲೆಗಳನ್ನು ಮಾಡಿ ಕೊಟ್ಟಿರುವುದು ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಆನಂದ ಬಿ ಎಚ್ಚರಿಕೆ ನೀಡಿದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ