ಜನರ ಸಮಸ್ಯೆಗಳಿಗೆ ದನಿಯಾಗಬೇಕಾದ ರಾಜಕೀಯ ಪಕ್ಷಗಳು ವ್ಯಕ್ತಿ ಪ್ರತಿಷ್ಠೆಯ ಕಾಳಗದಲ್ಲಿ ಮುಳುಗಿ ಬಿಟ್ಟಿವೆ . ಇದರಿಂದ ಪ್ರಜಾಪ್ರಭುತ್ವದ ಆಶಯಗಳು ಧಕ್ಕೆಗೊಳಗಾಗಿದೆ .
ಇಷ್ಟಕ್ಕೂ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಿದ್ದರಾಮಯ್ಯ ಎಂಬ ನಾಮ ಹಲವು ಕಾರಣಗಳಿಗಾಗಿ ಮಹತ್ವ ಹೊಂದಿದೆ.
ಹಿಂದುಳಿದ ಸಮುದಾಯದಿಂದ ಬೆಳೆದು ರಾಜ್ಯದ ಮುಖ್ಯಮಂತ್ರಿ ಗಾದಿಯವರೆಗೆ ತಲುಪಿದ ಅವರ ರಾಜಕೀಯ ಪಯಣ ನಿಜಕ್ಕೂ ಸಾಮಾನ್ಯವಾದುದಲ್ಲ. ದಶಕಗಳ ಕಾಲದ ಸಾರ್ವಜನಿಕ ಜೀವನ, ಅಧಿಕಾರದ ಅವಧಿಯಲ್ಲಿ ಕೊಟ್ಡ ಜನಪರ ಕಾರ್ಯಕ್ರಮಗಳು , ಅವರ ಸಾಮಾಜಿಕ ನ್ಯಾಯದ ಹೋರಾಟ ಹಾಗೂ ಅಹಿಂದ ವರ್ಗಗಳ ಆಶೋತ್ತರಗಳಿಗೆ ಧ್ವನಿಯಾಗಿದ್ದಾರೆ .
ಅವರ ರಾಜಕೀಯ ಬದುಕಿನ ಪ್ರಮುಖ ಆಯಾಮಗಳು, ದೇವರಾಜ ಅರಸು ಅವರ ನಂತರ ದೀರ್ಘಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ನಾಯಕರಲ್ಲಿ ಸಿದ್ದರಾಮಯ್ಯ ಅತಿ ಪ್ರಮುಖರು .
ಇವರು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನು ಹೊಂದಿದ್ದಾರೆ . ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹತ್ತು ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಸಾಮಾನ್ಯರ ಬದುಕು ಹಸನುಗೊಳಿಸಿದ ಕೀರ್ತಿ ಹೊಂದಿದ್ದಾರೆ . ಹೀಗೆ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಇವರ ಆಡಳಿತ ಶೈಲಿಯ ಪ್ರಮುಖ ಹೆಗ್ಗುರುತಾಗಿದೆ .
ಆದರೂ
ಇವರ ಆಡಳಿತವನ್ನು , ನೀತಿ ನಿರ್ಧಾರಗಳನ್ನು ಟೀಕಿಸುವ ಹಕ್ಕು ಪ್ರತಿಪಕ್ಷಗಳಿಗಿದೆ.
ಆಡಳಿತದ ಲೋಪದೋಷಗಳನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣ ಎಂಬುದು ಪ್ರಜಾಪ್ರಭುತ್ವವಾದಿಗಳಿಗೆ ತಿಳಿದಿದೆ . ಆದರೆ ರಾಜಕೀಯ ಟೀಕೆ ಮತ್ತು ವ್ಯಕ್ತಿತ್ವದ ತೇಜೋವಧೆ ಇವೆರಡರ ನಡುವೆ ಸ್ಪಷ್ಟವಾದ ಗೆರೆ ಇರಬೇಕು.
ಇದನ್ನೇಕೆ ಹೇಳುತ್ತಿರುವೆನೆಂದರೆ , ಸ್ಟಿಂಗ್ ಆಪರೇಷನ್ ನ ತನಿಖೆಯ ಹೆಸರಿನಲ್ಲಿ ರಾಜಕೀಯ ಪ್ರತಿಷ್ಠೆಯ ಬಲಿ ಏಕೆ? ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರನ್ನು ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿರುವ ಸ್ಪಿಂಗ್ ಅಪರೇಷನ್ ವಿವಾದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನು ಎದುರಿಸುವ ಶಕ್ತಿ ಇಲ್ಲದಾಗ ವ್ಯಕ್ತಿಯ ವೈಯಕ್ತಿಕ ಪ್ರತಿಷ್ಠೆಯನ್ನೇ ಗುರಿಯಾಗಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮಾತ್ರವಲ ಹಿಂದುಳಿದ ವರ್ಗಗಳ ವಲಯದಲ್ಲಿ ಬಲವಾಗಿ ಚರ್ಚೆಯಾಗುತ್ತಿದೆ. ಆದರಿಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ. ಅದು ಆರೋಪ ಒಂದನ್ನು ಮಾಡುವುದು ಸುಲಭ. ಆದರೆ ಅದನ್ನು ಸತ್ಯವೆಂದು ಸಾಬೀತುಪಡಿಸುವುದು ಸುಲಭವಲ್ಲ . ಆರೋಪದ ಆಧಾರದಲ್ಲಿ ಒಬ್ಬ ವ್ಯಕ್ತಿಯನ್ನು ಅಪರಾಧಿಯಂತೆ ಬಿಂಬಿಸುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣವಲ್ಲ.
ಬೆಂಗಳೂರು ನಗರ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ವಿಡಿಯೋದಲ್ಲಿ ಬಿಂಬಿತವಾದ ಘಟನೆಗೆ ಸಂಬಂಧಿಸಿದ ಆರೋಪಗಳಿಗೆ ಇದುವರೆಗೆ ಸಾಕ್ಷ್ಯಗಳು ಬೆಂಬಲ ನೀಡಿಲ್ಲ ಎಂದು ತಿಳಿಸಿದ್ದಾರೆ. ವಿಡಿಯೋದಲ್ಲಿದ್ದ ಮಹಿಳೆ ತಾವು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಲ್ಲ ಎಂದು ಸಹ ಪೊಲೀಸರ ಬಳಿ ಹೇಳಿರುವುದು ವರದಿಯಾಗಿದೆ. ಇಷ್ಟಕ್ಕೆ ನಿಲ್ಲದೆ , ಮೂಲ ಮೊಬೈಲ್ ಫೋನ್ ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೂ ಕಳುಹಿಸಲಾಗಿದೆ. ಇಂತಹ ಹೊತ್ತಲ್ಲಿ ರಾಜಕೀಯ ಪಕ್ಷಗಳು ಸಂಯಮ ವಹಿಸಬೇಕಲ್ಲವೇ? ತನಿಖೆಯ ಪ್ರತಿಯೊಂದು ಬೆಳವಣಿಗೆಯನ್ನೂ ರಾಜಕೀಯ ಲಾಭ-ನಷ್ಟದ ಕನ್ನಡಕದಿಂದ ಕಾಣುವುದರಿಂದ ಸಮಾಜಕ್ಕೆ ಏನು ಸಂದೇಶ ಕೊಟ್ಟಂತಾಗುತ್ತದೆ ? ಅಕ್ಷರ , ಆರೋಗ್ಯ ,ಆಹಾರದಂತಹ ಪ್ರಶ್ನೆಗಳು ರಾಜಕೀಯಕ್ಕೆ ಮುಖ್ಯವಾಗಬೇಕು . ಇಂದು ಕರ್ನಾಟಕದ ಜನತೆ ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ . ನಿರುದ್ಯೋಗ, ಬೆಲೆ ಏರಿಕೆ, ರೈತರ ಸಂಕಷ್ಟ, ರಸ್ತೆ-ಚರಂಡಿಗಳ ದುಸ್ಥಿತಿ, ಸಂಚಾರ ದಟ್ಟಣೆ, ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ, ಶಿಕ್ಷಣ ವ್ಯವಸ್ಥೆಯ ಸವಾಲುಗಳು ಹೀಗೆ ಹತ್ತು ಹಲವು ವಿಚಾರಗಳು ಜನರನ್ನು ಕಾಡುತ್ತಿವೆ. ಇಂತಹ ಸಮಸ್ಯೆಗಳ ಬಗ್ಗೆ ರಾಜಕೀಯ ಪಕ್ಷಗಳು ಧ್ವನಿ ಎತ್ತಬೇಕು. ಸರ್ಕಾರವನ್ನು ಪ್ರಶ್ನಿಸಬೇಕು. ತಪ್ಪುಗಳನ್ನು ಅನಾವರಣಗೊಳಿಸಬೇಕು.
ಜನರ ಪರವಾಗಿ ಹೋರಾಡಬೇಕು. ಇದು ಪ್ರತಿಪಕ್ಷಗಳ ಕರ್ತವ್ಯ ಮಾತ್ರವಲ್ಲದೆ , ಆಡಳಿತ ಪಕ್ಷದ ಜವಾಬ್ದಾರಿಯೂ ಆಗಿದೆ . ಆದರೆ ದಿನಪೂರ್ತಿ ಸ್ಟಿಂಗ್ ಅಪರೇಷನ್, ಆರೋಪ-ಪ್ರತ್ಯಾರೋಪ, ತೇಜೋವಧೆಯ ಚರ್ಚೆಗಳಲ್ಲೇ ರಾಜಕೀಯ ಶಕ್ತಿ ಮತ್ತು ಸಮಯ ವ್ಯಯಿಸಿದರೆ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಾದರೂ ಹೇಗೆ? ಸಿದ್ದರಾಮಯ್ಯ ಅವರ ರಾಜಕೀಯ ಬದುಕಿನ ಬಗ್ಗೆ ಯಾರಿಗಾದರೂ ಭಿನ್ನಾಭಿಪ್ರಾಯವ ಇರಬಹುದು. ಅವರ ಆಡಳಿತದ ಬಗ್ಗೆ ಪ್ರಶ್ನೆಗಳಿರಬಹುದು. ಅವರ ನಿರ್ಧಾರಗಳನ್ನು ಟೀಕಿಸಬಹುದು. ಆದರೆ ಅದಕ್ಕೆ ದಾಖಲೆ, ವಾಸ್ತವಾಂಶ ಮತ್ತು ಪ್ರಜಾಸತ್ತಾತ್ಮಕ ಚರ್ಚೆಯೇ ಆಧಾರವಾಗಬೇಕೇ ಹೊರತು ಊಹಾಪೋಹಗಳಲ್ಲ…
ದಯವಿಟ್ಟು ರಾಜಕೀಯದ ಬಗ್ಗೆ ಜನರಲ್ಲಿ ಅಸಹ್ಯ ಮೂಡದಂತೆ ” ನಾಯಕರು ” ನಡೆದುಕೊಳ್ಳಬೇಕು . ಇಂತಹ ಬೆಳವಣಿಗೆಗಳು ಕೇವಲ ಒಬ್ಬ ರಾಜಕಾರಣಿಯ ಪ್ರತಿಷ್ಠೆಗೆ ಸಂಬಂಧಿಸಿದ ವಿಚಾರವಾಗಿ ಉಳಿಯುವುದಿಲ್ಲ. ಸಾಮಾಜಿಕವಾಗಿ, ರಾಜಕೀಯವಾಗಿ ಹಲವು ಪರಿಣಾಮಗಳನ್ನು ಉಂಟುಮಾಡುತ್ತವೆ. ಒಂದು ಸಮುದಾಯದ ಜನರಲ್ಲಿ ನೋವು, ಅಸಮಾಧಾನ ಮತ್ತು ಅಸಹಾಯಕತೆಯ ಭಾವನೆ ಮೂಡಿದರೆ ಅದು ಸಮಾಜದ ಸಾಮರಸ್ಯಕ್ಕೆ ಒಳ್ಳೆಯದಲ್ಲ.
ರಾಜಕೀಯ ಎಂದರೆ ಜನರ ಬದುಕನ್ನು ಕಾಪಾಡುವ , ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ವೇದಿಕೆ .
ಅದು ವೈಯಕ್ತಿಕ ದ್ವೇಷ, ಆರೋಪ-ಪ್ರತ್ಯಾರೋಪ ಮತ್ತು ಪ್ರತಿಷ್ಠೆಯ ಕಾಳಗದ ಅಖಾಡ ಆಗಬಾರದು .
ಆಗ ಸಾಮಾನ್ಯ ಜನರು ರಾಜಕೀಯ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡು ಬಿಡುತ್ತಾರೆ . ಸಿದ್ದರಾಮಯ್ಯ ಅವರ ಸಾರ್ವಜನಿಕ ಬದುಕನ್ನು ಕಾಕವೆಂಬ ಇತಿಹಾಸ ಮೌಲ್ಯಮಾಪನ ಮಾಡುತ್ತದೆ. ಅವರ ಸಾಧನೆಗಳಗಳನ್ನು ಗುರುತಿಸಿ , ಒಂದೊಮ್ಮೆ ಅದರಲ್ಲಿ ಲೋಪ ಇದ್ದರೆ ಅವುಗಳನ್ನು ಪ್ರಶ್ನಿಸಿ . ಹಾಗೊಮ್ಮೆ ಆರೋಪಗಳಿದ್ದರೆ ನಿಷ್ಪಕ್ಷಪಾತ ತನಿಖೆಯ ಮೂಲಕ ಸತ್ಯ ಹೊರಬರಲಿ . ಇದೇ ಪ್ರಜಾಪ್ರಭುತ್ವದ ಸೌಂದರ್ಯ. ವ್ಯಕ್ತಿಯನ್ನು ರಾಜಕೀಯವಾಗಿ ಎದುರಿಸುವುದಕ್ಕೂ, ವ್ಯಕ್ತಿತ್ವವನ್ನು ಹಾಳುಮಾಡಲು ಪ್ರಯತ್ನಿಸುವುದಕ್ಕೂ ವ್ಯತ್ಯಾಸವಿದೆ. ಇಂತಹ ವ್ಯತ್ಯಾಸವನ್ನು ರಾಜಕೀಯ ಪಕ್ಷಗಳು ಅರ್ಥಮಾಡಿಕೊಳ್ಳಬೇಕಿದೆ. ಮುಂದಿನ ಪೀಳಿಗೆಗೆ ನಾವು ಯಾವ ಬಗೆಯ ರಾಜಕೀಯ ಸಂಸ್ಕೃತಿಯನ್ನು ಕೊಡುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಾಗಿದೆ. ರಾಜಕೀಯ ನಾಯಕರು ಪರಸ್ಪರ ಕೆಸರೆರಚಾಡುವುದನ್ನು ಕಂಡು ಯುವಜನತೆ ರಾಜಕೀಯದ ಬಗ್ಗೆ ಗೌರವ ಬೆಳೆಸಿಕೊಳ್ಳಲು ಸಾಧ್ಯವೇ ಇಲ್ಲ . ಸಾರ್ವಜನಿಕ ಜೀವನ ಪ್ರವೇಶಿಸಲು ಬಯಸುವವರಿಗೆ ಇದು ಯಾವ ರೀತಿಯ ಸಂದೇಶ ನೀಡುತ್ತದೆ ಎಂಬುದನ್ನು ಚಿಂತಿಸಿ . ರಾಜಕೀಯ ಪಕ್ಷಗಳ ನಾಯಕರೇ, ನಿಮ್ಮ ನಡುವಿನ ಕಾಳಗದಲ್ಲಿ ಜನರನ್ನು ಬಲಿಪಶು ಮಾಡಬೇಡಿ. ಆರೋಪಗಳಿದ್ದರೆ ತನಿಖೆಗೆ ಬಿಡಿ. ತಪ್ಪಿದ್ದರೆ ಕಾನೂನು ಕ್ರಮಕ್ಕೆ ಅವಕಾಶ ಕೊಡಿ. ಆದರೆ ಜನರ ಬದುಕಿನ ಪ್ರಶ್ನೆಗಳನ್ನು ಮರೆತು ಪ್ರತಿಷ್ಠೆಯ ಕಾದಾಟದಲ್ಲಿ ಮುಳುಗಬೇಡಿ. ಸಿದ್ದರಾಮಯ್ಯ ಅವರ ಬಗ್ಗೆ ತೀರ್ಪು ನೀಡಬೇಕಾದದ್ದು ರಾಜಕೀಯ ಪ್ರಚಾರವಲ್ಲ . ಸತ್ಯ, ಸಾಕ್ಷ್ಯ ಮತ್ತು ಕಾನೂನು. ಜನರಿಗೆ ಬೇಕಿರುವುದು ಸ್ಟಿಂಗ್ ಅಪರೇಷನ್ಗಳ ರಾಜಕೀಯವಲ್ಲ . ಜನಪರ ಆಡಳಿತ. ಆರೋಪಗಳ ಅಬ್ಬರವಲ್ಲ, ಅಭಿವೃದ್ಧಿಯ ಫಲ . ವೈಯಕ್ತಿಕ ಪ್ರತಿಷ್ಠೆಯ ಸಮರವಲ್ಲ, ಸಮ ಸಮಾಜದ ನಿರ್ಮಾಣ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿರಲಿ , ಆದರೆ ವೈಯಕ್ತಿಕ ದ್ವೇಷ ಬೇಡ. ಟೀಕೆಗಳಿರಲಿ , ತೇಜೋವಧೆ ಬೇಡ. ಅಧಿಕಾರಕ್ಕಾಗಿ ಹೋರಾಟವಿರಲಿ , ಆದರೆ ಜನರ ಹಿತಾಸಕ್ತಿ ಬಲಿಯಾಗದಿರಲಿ. ಇದೇ ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ರಾಜಕೀಯ ಸಂಸ್ಕೃತಿ.