ಕಬ್ಬು ಬೆಲೆ ನಿಗದಿ ಕುರಿತು ನಡೆದ ಸಭೆಯಲ್ಲಿ ರೈತರ ಹಿತಾಸಕ್ತಿಗೆ ಧಕ್ಕೆ ಉಂಟಾಗುವ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈತ ಮುಖಂಡ ರಮೇಶ ಹೂಗಾರ ಆರೋಪಿಸಿದ್ದಾರೆ.
ಸಭೆಯಲ್ಲಿ ₹3,500 + ₹100 ಸೇರಿ ₹3,600 ಪ್ರತಿ ಟನ್ ದರ ನಿಗದಿಪಡಿಸಲಾಗಿದೆ. ಆದರೆ, ಸಕ್ಕರೆ ಬೆಲೆ ಹೆಚ್ಚಾದರೆ ಅದರ ಲಾಭವನ್ನು ರೈತರಿಗೆ ಹಂಚಿಕೆ ಮಾಡಬೇಕು ಎಂಬ ಯಾವುದೇ ಮಾನದಂಡವನ್ನು ಒಪ್ಪಂದದಲ್ಲಿ ಸೇರಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾವು ₹3,450 ಮೂಲ ಬೆಲೆ ನಿಗದಿಪಡಿಸಿ, ಸಕ್ಕರೆ ಬೆಲೆ ಹೆಚ್ಚಾದಾಗ ಅದರ ಲಾಭದಲ್ಲಿ 25 ಶೇಕಡಾ ಕಾರ್ಖಾನೆಗಳಿಗೆ ಹಾಗೂ 75 ಶೇಕಡಾ ರೈತರಿಗೆ ನೀಡುವ ಸೂತ್ರವನ್ನು ಪ್ರಸ್ತಾಪಿಸಿದ್ದೆವು. ಈ ಪ್ರಸ್ತಾವನೆ ಅಂಗೀಕಾರವಾಗಿದ್ದರೆ ರೈತರಿಗೆ ಕನಿಷ್ಠ ₹3,850 ಪ್ರತಿ ಟನ್ ದರ ದೊರೆಯುತ್ತಿತ್ತು. ಆದರೆ, ಆ ಅವಕಾಶ ಕೈತಪ್ಪಿದೆ ಎಂದು ರಮೇಶ ಹೂಗಾರ ಬೇಸರ ವ್ಯಕ್ತಪಡಿಸಿದ್ದಾರೆ.
ಸಕ್ಕರೆ ಬೆಲೆ ಏರಿಕೆಯಿಂದ ಉಂಟಾಗುವ ಲಾಭದಲ್ಲಿ ರೈತರಿಗೆ ನ್ಯಾಯಯುತ ಪಾಲು ಸಿಗುವಂತೆ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.