ವಿಚ್ಛೇದಿತ ಮಹಿಳೆಯನ್ನು ಮದುವೆಯಾಗಿದ್ದ ನಟನ ವಿರುದ್ಧ ವಂಚನೆ ಹಾಗೂ ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಹಲ್ಲೆ ಮಾಡಿ ಚಿನ್ನದ ಮಾಂಗಲ್ಯ ಸರ ಕಸಿದುಕೊಂಡಿರುವುದಾಗಿ ಆರೋಪಿಸಿ ನಟನ ವಿರುದ್ಧ ಪತ್ನಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬನಶಂಕರಿ ನಿವಾಸಿ 39 ವರ್ಷದ ಮಹಿಳೆ ಪತಿ ಮೋಹನ್ ರಾಜ್ ವಿರುದ್ಧ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜ.3ರ ರಾತ್ರಿ ಪತಿ ಮೋಹನ್ ರಾಜ್, ತನ್ನ ಸ್ನೇಹಿತರನ್ನು ಮನೆ ಬಳಿ ಕರೆತಂದು ತನ್ನ ವಿರುದ್ಧ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ್ದ. ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನ ಕಸಿದು ಪರಾರಿಯಾಗಿದ್ದ. ಈ ಬಗ್ಗೆ ಪೊಲೀಸ್ ಸಹಾಯವಾಣಿೆ ಕರೆ ಮಾಡಿದರೂ ಸ್ಪಂದಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ದೂರುದಾರ ಮಹಿಳೆ, 10 ವರ್ಷಗಳ ಹಿಂದೆ ಪರಿಚಯವಾದ ಮೋಹನ ರಾಜ್‌ನನ್ನು ಪರಸ್ಪರ ಒಪ್ಪಿ 2022ರಲ್ಲಿ ಮದುವೆ ಮಾಡಿಕೊಂಡೆ. 2023ರ ಫೆಬ್ರವರಿಯಲ್ಲಿ ಹೆಣ್ಣು ಮಗು ಆಯಿತು. 2025ರಲ್ಲಿ ಮನೆ ಬಿಟ್ಟು ಹೋದವರು ಮತ್ತೆ ವಾಪಸ್ ಬಂದಿಲ್ಲ. ಈ ಬಗ್ಗೆ ಬನಶಂಕರಿ ಠಾಣೆಗೆ ದೂರು ನೀಡಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು. ಮದುವೆಯಾದ ಒಂದೆರಡು ವರ್ಷಗಳ ಬಳಿಕ ವೈಯಕ್ತಿಕ ಕಾರಣಕ್ಕಾಗಿ ಪತಿಗೆ ವಿಚ್ಛೇದನ ನೀಡಿ ಒಂಟಿಯಾಗಿದ್ದೆ. ಈ ವೇಳೆ ಪರಿಚಯಗೊಂಡ ಮೋಹನ್ ರಾಜ್‌ನನ್ನು ವಿವಾಹವಾದೆ.
ಮನೆ ಕಟ್ಟಲು ನನ್ನಿಂದ 36 ಲಕ್ಷ ರೂ. ಪಡೆದಿದ್ದ. ಹೊಸ ಮನೆ ಕಟ್ಟಿ ಗೃಹ ಪ್ರವೇಶವಾದರೂ ತನ್ನನ್ನು ಮನೆಗೆ ಕರೆದೊಯ್ದದೆ ಜಾತಿ ನಿಂದನೆ ಮಾಡಿದ್ದ. ನಂತರ ಆತನ ವರ್ತನೆ ಬಗ್ಗೆ ಅನುಮಾನ ಬಂದು ಪರಿಶೀಲಿಸಿದಾಗ ಬೇರೆ ಯುವತಿ ಜತೆ ಸಂಬಂಧ ಹೊಂದಿರುವುದು ಗೊತ್ತಾಯಿತು. ಆದರೂ ಸುಮ್ಮನಿದ್ದೆ, ದಿನೇ ದಿನೆ ಈತನ ಕಿರುಕುಳ ಹೆಚ್ಚಾಗಿದ್ದರಿಂದ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೋಹನ್ ರಾಜ್, ಬೆಂಗಳೂರು ಆಕಾಶವಾಣಿ ನಿಲಯ, ಆಯಪಲ್ ಕೇಕ್, ಮುಖ್ಯಮಂತ್ರಿ ಕಳೆದೊದ್ನಪ್ಪ ಸಿನಿಮಾಗಳಲ್ಲಿ ಅಭಿನಯಿಸಿದ್ದೆ. ಅದಕ್ಕೂ ಮೊದಲು ಸಿನಿಮಾಗಳಲ್ಲಿ ಸಾಹಸ ಕಲಾವಿದನಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ಪ್ರಮೋಷನ್‌ಗೆ ತೆಗೆಸಿದ ಪೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಮೋಹನ್ ರಾಜ್ ಆರೋಪಿಸಿದ್ದಾರೆ.
ವಿವಾಹವಾಗಿಲ್ಲ, ಲಿವಿಂಗ್ ಟುಗೆದರ್‌ನಲ್ಲಿದ್ದೆ: ನಟ
ಮತ್ತೊಂದೆಡೆ ಪತ್ನಿ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮೋಹನ್ ರಾಜ್, ಫೇಸ್‌ಬುಕ್ ಮೂಲಕ ಮಹಿಳೆಯ ಪರಿಚಯವಾಗಿತ್ತು. 2 ವರ್ಷಗಳ ಕಾಲ ಲಿವಿಂಗ್ ಟುಗೆದರ್‌ನಲ್ಲಿ ಇದ್ದಿದ್ದು ನಿಜ. ಈ ವೇಳೆ ಒಂದು ಹೆಣ್ಣು ಮಗುವಾಯಿತು. ಆಕೆಯನ್ನು ಮದುವೆಯಾಗಿಲ್ಲ. ಆದರೆ ಮಗು ನನ್ನದು ಎಂದು ಒಪ್ಪಿಕೊಳ್ಳುವೆ. ನನ್ನ ವಿರುದ್ಧ ಮಹಿಳೆ ಮಾಡುತ್ತಿರುವ ಆರೋಪ ಸುಳ್ಳು. ನಾನೇ ಮನೆಯನ್ನು ಲೀಸ್‌ಗೆ ಹಾಕಿಸಿಕೊಳ್ಳಲು 12 ಲಕ್ಷ ರೂ. ಹಣ ನೀಡಿರುವೆ. ಹೆಣ್ಣು ಮಗುವಿಗೆ ಚಿನ್ನಾಭರಣ ನೀಡಿದ್ದೇನೆ. ಆದರೂ ಮಹಿಳೆಯಿಂದ ಮಾನಸಿಕ ಕಿರುಕುಳ ಹೆಚ್ಚಾಗಿದ್ದು, ನನ್ನ ವಿರುದ್ಧ ಜಾತಿನಿಂದನೆ ಮಾಡಿರುವುದಾಗಿ ಈ ಹಿಂದೆ ದೂರು ನೀಡಿದ್ದಳು. ಇದೀಗ ಮತ್ತೂಂದು ದೂರು ನೀಡಿದ್ದಾರೆ ಎಂದಿದ್ದಾರೆ.