ಉಮೇಶ್ ಮೇಟಿ ಪರ ಯತೀಂದ್ರ ಸಿದ್ದರಾಮಯ್ಯ ಭರ್ಜರಿ ಮತಯಾಚನೆ
ಬಾಗಲಕೋಟೆ: ದಿವಂಗತ ಮಾಜಿ ಅಬಕಾರಿ ಸಚಿವ ಹಾಗೂ ಶಾಸಕ ಹೆಚ್.ವೈ. ಮೇಟಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಖಾಡ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ, ಹೆಚ್.ವೈ. ಮೇಟಿಯವರ ಪುತ್ರ ಶ್ರೀ ಉಮೇಶ ಮೇಟಿ ಅವರ ಪರವಾಗಿ ಇಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ಅವರು ಬಿರುಸಿನ ಮತಯಾಚನೆ ನಡೆಸಿದರು.
ಕ್ಷೇತ್ರದ ವಿವಿಧೆಡೆ ಸಂಚರಿಸಿದ ಅವರು, “ಹೆಚ್.ವೈ. ಮೇಟಿಯವರು ಈ ಭಾಗದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಅವರ ಜನಪರ ಕೆಲಸಗಳನ್ನು ಮುಂದುವರಿಸಲು ಉಮೇಶ ಮೇಟಿ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು” ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ಶ್ರೀ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದರು. ಪ್ರಚಾರ ಕಾರ್ಯಕ್ರಮದಲ್ಲಿ ಹೆಚ್.ವೈ. ಮೇಟಿಯವರ ಪುತ್ರಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬಾಯಕ್ಕ ಮೇಟಿ, ವಿಜಯಪುರ ಜಿಲ್ಲಾ ಮೀನುಗಾರ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಶ್ರೀ ಕೃಷ್ಣ ಕಾಮಾಟಿ, ಪ್ರಮುಖ ಮುಖಂಡರಾದ ಬಸವರಾಜ, ಶರಣಪ್ಪ, ಜಯಂತ ಸೇರಿದಂತೆ ವಿವಿಧ ತಾಲ್ಲೂಕುಗಳ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು