ಯಾದಗಿರಿ: ಯಾದಗಿರಿ ಜಿಲ್ಲೆಯ ಶಾಹಪುರ ತಾಲ್ಲೂಕಿನ ಬೀದರಾಣಿ ಗ್ರಾಮ ಮೂಲಕ ಇಬ್ರಾಂಪುರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಕೊಳಚೆ ನೀರಿನಿಂದ ಜಲಾವೃತಗೊಂಡಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ಬದಿಯ ಚರಂಡಿಗಳು ಹೂಳು ತುಂಬಿಕೊಂಡಿರುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ನೇರವಾಗಿ ರಸ್ತೆಯ ಮೇಲೆಯೇ ನಿಂತು, ರಸ್ತೆ ಕೆಸರುಗದ್ದೆಯಂತಾಗಿದೆ.
ಪ್ರತಿದಿನ ಇದೇ ರಸ್ತೆಯನ್ನು ಬಳಸುವ ಶಾಲಾ ಮಕ್ಕಳು, ಮಹಿಳೆಯರು, ರೈತರು ಹಾಗೂ ವೃದ್ಧರು ಕೊಳಚೆ ನೀರಿನಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ದುರ್ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾತ್ರಿ ವೇಳೆ ರಸ್ತೆ ಗೋಚರಿಸದೇ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಳ್ಳುತ್ತಿರುವ ಘಟನೆಗಳು ವರದಿಯಾಗಿವೆ.
ಜಾಹೀರಾತು

ಸ
ಸಾಂಕ್ರಾಮಿಕ ರೋಗದ ಬೀತಿಯಲ್ಲಿ ಜನರು
ರಸ್ತೆ ಮಧ್ಯದಲ್ಲಿಯೇ ದಿನಗಟ್ಟಲೆ ಕೊಳಚೆ ನೀರು ನಿಂತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು, ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
• ಗ್ರಾಮಸ್ಥರ ಆಕ್ರೋಶ
“ಈ ರಸ್ತೆ ಹಾಗೂ ಚರಂಡಿ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಅಧಿಕಾರಿಗಳು ಭರವಸೆ ನೀಡುವುದನ್ನು ಬಿಟ್ಟರೆ ಕಾರ್ಯರೂಪಕ್ಕೆ ತರುತ್ತಿಲ್ಲ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ಕ್ರಮಕ್ಕೆ ಆಗ್ರಹ
ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಆಡಳಿತವು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಚರಂಡಿಗಳಲ್ಲಿರುವ ಹೂಳನ್ನು ತೆರವುಗೊಳಿಸಿ, ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ **ದೇವಿಂದ್ರಪ್ಪಗೌಡ ಬೀದರಾಣಿ, ಹಣಮಂತ್ರಾಯ ಬೀರಾದರ್, ಶರಣ್ಣಗೌಡ ಬೀರಾದರ್, ಮಲ್ಲಪ್ಪ ನೇಡಿಗಿ, ಹಣಮಂತ್ರಾಯ ಬೀದರಾಣಿ ಹಾಗೂ ಚಂದ್ರಶೇಖರ ಹಣಿಗೇರಾ** ಸೇರಿದಂತೆ ಹಲವು ಗ್ರಾಮಸ್ಥರು ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.